Monday, August 13, 2012

ದ್ವಿಜರಲ್ಲ ಇವರು ದಲಿತರು, ಎರಡೆರಡು ಸಲ ಸಾಯುವವರು !


 ಡಿ. ಉಮಾಪತಿ
 
 
ದ್ವಿಜರಲ್ಲ ಇವರು ದಲಿತರು, ಎರಡೆರಡು ಸಲ ಸಾಯುವವರು!
ಭಾರತದ ಉಚ್ಚ ಕುಲದವರು ಎರಡೆರಡು ಸಲ ಹುಟ್ಟುತ್ತಾರಂತೆ. ಒಮ್ಮೆ ತಾಯಿಯ ಬಸಿರಿನಿಂದ ಜನಿಸಿದಾಗ. ಮತ್ತೊಮ್ಮೆ ಉಪನಯನದ ವೇಳೆ ಬ್ರಹ್ಮೋಪದೇಶ ಪಡೆದು ಉಪವೀತ ಧರಿಸಿದಾಗ. ಎರಡು ಸಾರಿ ಸಾಯುವ ಕುಲಗಳೂ ಇವೆ. ಕೀಳು ಕುಲಗಳ ದಲಿತರು ವಿಶೇಷವಾಗಿ ಪಾಕಿಸ್ತಾನದ ದಲಿತರು ಎರಡೆರಡು ಬಾರಿ ಸಾಯುತ್ತಾರೆ. ಒಮ್ಮೆ ತಾಯಿಯ ಬಸಿರಿನಿಂದ ಹೊರಬಿದ್ದಾಗ. ಇನ್ನೊಮ್ಮೆ ಕಡೆಯುಸಿರೆಳೆದು ಮಣ್ಣಲ್ಲಿ ಮಣ್ಣಾದಾಗ.

ಪಾಕಿಸ್ತಾನದಿಂದ ಇಂಡಿಯಾಗೆ ಹೊರಟಿದ್ದ 130 ಹಿಂದೂಗಳನ್ನು ಪಾಕಿಸ್ತಾನಿ ಅಧಿಕಾರಿಗಳು ಉಭಯ ದೇಶಗಳ ವಾಘಾ ಗಡಿಯಲ್ಲಿ ತಡೆದು ನಿಲ್ಲಿಸಿರುವ ವರದಿಗಳಿಗೆ ವ್ಯಾಪಕ ಪ್ರಚಾರ ದೊರೆತಿದೆ. ಈ ಹಿಂದೂಗಳನ್ನು ಭಾರತಕ್ಕೆ ಹೋಗಲು ಬಿಡುವುದಿಲ್ಲ ಎಂದು ಸಿಡುಕಿರುವ ಆ ದೇಶದ ಒಳಾಡಳಿತ ಮಂತ್ರಿ ರೆಹ್ಮಾನ್ ಮಲ್ಲಿಕ್. ಹಿಂದೂಗಳ ಈ ವಲಸೆಯ ಕತೆಗಳು ಪಾಕಿಸ್ತಾನದ ಹೆಸರಿಗೆ ಮಸಿ ಬಳಿಯುವ ಹುನ್ನಾರಗಳು ಎಂದು ಗಳುಹಿದ್ದಾರೆ.

ಆದರೆ ಪಾಕಿಸ್ತಾನೀ ಮಾನವ ಹಕ್ಕುಗಳ ಆಯೋಗದ ನಿಲವು ಸತ್ಯಾಂಶವನ್ನು ಧ್ವನಿಸುವಂತಿದೆ. ಸಿಂಧ್ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಿಂದ ಧಾರ್ಮಿಕ ಅಲ್ಪಸಂಖ್ಯಾತರ ಮುಂದುವರೆದ ವಲಸೆ ಕಳವಳಕಾರಿ ಎಂದು ಬಣ್ಣಿಸಿರುವ ಆಯೋಗ ಈ ಕುರಿತು ತೀವ್ರ ಆಕ್ರೋಶ ಪ್ರಕಟಿಸಿದೆ.

ವಲಸೆ ಹೋಗುವಂತೆ ಸ್ಥಳೀಯ ಪಟ್ಟಭದ್ರ ಹಿತಗಳು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಬಲಪ್ರಯೋಗ ಮಾಡುತ್ತಿವೆ. ಈ ಪಟ್ಟಭದ್ರರ ಪೈಕಿ ಕೆಲವರು ಧಾರ್ಮಿಕ ಕಟ್ಟರ್‌ಪಂಥೀಯರು. ಉಳಿದವರು ಅಲ್ಪಸಂಖ್ಯಾತರ ಆಸ್ತಿಪಾಸ್ತಿ ಕಬಳಿಸುವ ಪಿತೂರಿಕೋರರು. ಅಲ್ಪಸಂಖ್ಯಾತ ನಾಗರಿಕರನ್ನು ಹಿಂಸೆ, ಬಲಾತ್ಕಾರ, ತಾರತಮ್ಯ ಹಾಗೂ ತರುಣಿಯರ ಬಲವಂತದ ಮತಾಂತರದ ಅಸಹ್ಯಕರ ಅತ್ಯಾಚಾರಗಳನ್ನು ತಡೆಯುವಲ್ಲಿ ಪಾಕಿಸ್ತಾನಿ ಸರ್ಕಾರ ವಿಫಲ ಆಗಿದೆ. ಈ ವೈಫಲ್ಯದ ಪ್ರತಿಬಿಂಬವೇ ಮುಸ್ಲಿಮೀತರ ನಾಗರಿಕರ ವಲಸೆ ಎಂಬುದು ಪಾಕಿಸ್ತಾನೀ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಝೋಹ್ರಾ ಯೂಸೂಫ್ ಅವರು ಶುಕ್ರವಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ.

ಇತ್ತೀಚೆಗೆ ಹಿಂದೂ ಯುವಕನೊಬ್ಬ ಇಸ್ಲಾಮ್ ಧರ್ಮಕ್ಕೆ ಮತಾಂತರ ಹೊಂದುವ ಧಾರ್ಮಿಕ ವಿಧಿ ವಿಧಾನಗಳನ್ನು ಟೆಲಿವಿಷನ್ ಚಾನೆಲ್ಲೊಂದರ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ತೋರಿಸಿದ್ದು ಅತಿ ಹೇಯ ಮತ್ತು ಅಸಮರ್ಥನೀಯ ಎಂದೂ ಝೋಹ್ರಾ ಹೇಳಿದ್ದಾರೆ.

ಇಂತಹ ಪ್ರಕರಣ ಅಥವಾ ಪ್ರಕರಣಗಳಲ್ಲಿ ಮಾತುಗಳು, ಪದಗಳು, ವಾಕ್ಯಗಳ ನಡುವೆ ಹುದುಗಿರುವ ಕ್ರೂರ ವಾಸ್ತವವೊಂದು ಉಂಟು. ಪಾಕಿಸ್ತಾನೀ ಹಿಂದೂ ಜನಸಂಖ್ಯೆಯ ಅಧಿಕತ ಅಂಕಿ ಅಂಶಗಳು ಲಭ್ಯವಿಲ್ಲ. ಒಂದು ಅಂದಾಜಿನ ಪ್ರಕಾರ ಈ ಸಂಖ್ಯೆ 40ರಿಂದ 60 ಲಕ್ಷದಷ್ಟು. ನಲವತ್ತೇ ಇರಲಿ, ಅರವತ್ತೇ ಆಗಲಿ, ಈ ಜನಸಂಖ್ಯೆಯ ಪೈಕಿ ದಲಿತರ ಪ್ರಮಾಣ ಶೇ.75ರಷ್ಟು. ಹಿಂದೂಗಳು ದಲಿತರನ್ನು ಹಿಂದೂಗಳಂತೆ ನಡೆಸಿಕೊಳ್ಳುತ್ತಿಲ್ಲ. ಆದರೂ ಒಟ್ಟಾರೆ ಲೆಕ್ಕದ ಪ್ರಶ್ನೆ ಬಂದಾಗ ದಲಿತರನ್ನು ಹಿಂದೂಗಳ ಲೆಕ್ಕದಲ್ಲೇ ಸೇರಿಸಿ ಹೇಳಲಾಗುತ್ತದೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಮಾತಾಡಿದಾಗಲೆಲ್ಲ ಕ್ರೈಸ್ತರು, ಅಹ್ಮದೀಯರು ಹಾಗೂ ಹಿಂದೂಗಳ ಪ್ರಸ್ತಾಪ ಆಗುತ್ತದೆ. ಆದರೆ ಈ ಅಲ್ಪಸಂಖ್ಯಾತರೊಳಗಡೆಯೇ ಅಲ್ಪಸಂಖ್ಯಾತರಿದ್ದಾರೆ. ಅವರು ಸಿಂಧ್ ಮತ್ತು ದಕ್ಷಿಣ ಪಂಜಾಬಿನ ಕೆಳಜಾತಿಯ ಹಿಂದೂಗಳು. ಇವರ ಸಂಖ್ಯೆ ಇಪ್ಪತ್ತು ಲಕ್ಷದಿಂದ ನಲವತ್ತು ಲಕ್ಷದವರೆಗೆ ಇದ್ದೀತು. ಸವರ್ಣೀಯ ಹಿಂದೂಗಳಿಗೆ ಇವರ ಕುರಿತು ಯಾವ ಕಾಳಜಿಯೂ ಇಲ್ಲ ಎನ್ನುತ್ತಾರೆ ಪಾಕಿಸ್ತಾನದ ನೀತಿ ನಿರ್ಧಾರಗಳ ವಿಮರ್ಶಕ ಸಿದ್ದೀಕ್ ಹುಮಾಯೂನ್.

ಪಾಕಿಸ್ತಾನದ ದಲಿತರ ಕತೆ ಪಾಕಿಸ್ತಾನದಷ್ಟೇ ಹಳೆಯದು. ಜೋಗೇಂದ್ರನಾಥ ಮಂಡಲ್ ಎಂಬ ದಲಿತ ನಾಯಕರನ್ನು ಮುಹಮ್ಮದ್ ಆಲಿ ಜಿನ್ನಾ ಪಾಕಿಸ್ತಾನದ ಪ್ರಥಮ ಕಾನೂನು ಮತ್ತು ಕಾರ್ಮಿಕ ಮಂತ್ರಿಯನ್ನಾಗಿ ಮಾಡಿದ್ದರು. ಅದೇ ಕಡೆ, ಆ ದೇಶದಲ್ಲಿ ದಲಿತರೊಬ್ಬರು ಅಂತಹ ಉನ್ನತ ಸ್ಥಾನಕ್ಕೆ ಮತ್ತೆಂದೂ ಏರಗೊಡಲಿಲ್ಲ. ಜಿನ್ನಾ ಸಾವಿನ ನಂತರ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವಾಯಿತು. ಪೂರ್ವ ಬಂಗಾಳದಲ್ಲಿ (ಈಗಿನ ಬಾಂಗ್ಲಾ ದೇಶ) 1950 ಸುಮಾರಿನಲ್ಲಿ ಸಾವಿರಾರು ಮಂದಿ ದಲಿತರ ನರಮೇಧ ಮತ್ತು ಭಾರತಕ್ಕೆ ನಿರಾಶ್ರಿತರ ವಲಸೆಯ ಅಲೆಯನ್ನು ಕಂಡು ಹತಾಶರಾದರು ಮಂಡಲ್. 1953ರಲ್ಲಿ ಭಾರತಕ್ಕೆ ಓಡಿ ಬಂದು ಅಂದಿನ ಪಾಕ್ ಪ್ರಧಾನಿ ಲಿಯಾಕತ್ ಆಲಿ ಖಾನ್‌ಗೆ ತಮ್ಮ ರಾಜೀನಾಮೆ ಪತ್ರ ಕಳಿಸಿಕೊಟ್ಟರು. ಭಾರತಕ್ಕೆ ವಲಸೆ ಹೋಗುವ ಸುಲಭದ ದಾರಿಯನ್ನು ಸವರ್ಣೀಯರನೇಕರು ಆರಿಸಿಕೊಂಡರು. ಆದರೆ ನಿರ್ಗತಿಕ ಕೆಳಜಾತಿಗಳಿಗೆ ಅಲ್ಲಿಯೇ ಉಳಿಯದೆ ಗತ್ಯಂತರ ಇರಲಿಲ್ಲ.

1998ರಲ್ಲಿ ದಲಿತರ ಪಾಲಿನ ಶೇ.6ರಷ್ಟು ಸರ್ಕಾರಿ ಉದ್ಯೋಗ ಮೀಸಲಾತಿಯನ್ನು ಅಲ್ಪಸಂಖ್ಯಾತರ ಕೋಟಾ ಎಂದು ಬದಲಾಯಿಸಲಾಯಿತು. ಪಾಕಿಸ್ತಾನದ ಸಂಸತ್ತಿನ ಅಂದಿನ ಇಬ್ಬರು ದಲಿತ ಸದಸ್ಯರಾದ ಕ್ರಿಶನ್ ಭೀಲ್ ಮತ್ತು ಡಾ.ಮೇಘ್ವಾರ್ ಈ ಅನ್ಯಾಯಕ್ಕೆ ಅಸಹಾಯಕ ಸಾಕ್ಷಿಗಳಾದರು. ತೀಕ್ಷ್ಣಸ್ವರೂಪದ ಬಲಿಷ್ಠ ಅಲ್ಪಸಂಖ್ಯಾತ ಸಂಸದರನ್ನು ಅವರು ಎದುರಿಸದೆ ಹೋದರು. ಈ ಬೆಳವಣಿಗೆಯಿಂದಾಗಿ ಕಾನೂನಿನ ಪ್ರಕಾರ ಪಾಕಿಸ್ತಾನದ ಅಲ್ಪಸಂಖ್ಯಾತರ ಭಾಗವಾಗಿ ಕರಗಿ ಹೋದರು ದಲಿತರು. ಆದರೆ ಅಲ್ಪಸಂಖ್ಯಾತರು ದಲಿತರನ್ನು ತಮ್ಮವರು ಎಂದು ಒಪ್ಪಿಕೊಳ್ಳದೆ ಹೊರಗೇ ಇರಿಸಿದರು. ಇಬ್ಬಗೆಯ ತಾರತಮ್ಯವನ್ನು ಎದುರಿಸುವ ಇವರು ಪಾಕಿಸ್ತಾನಿ ಸಮಾಜದ ಪಾಲಿಗೆ ಅಲ್ಪಸಂಖ್ಯಾತರಾದರೆ, ಸವರ್ಣೀಯ ಹಿಂದೂ ಅಲ್ಪಸಂಖ್ಯಾತರ ಪಾಲಿಗೆ ಕೀಳು ಜಾತಿಗಳ ದಲಿತರು ಎನ್ನುತ್ತಾರೆ ಸಿದ್ದೀಕ್.

''ಹಮೇ ಭೀ ಜೀನೇ ದೋ: ಪಾಕಿಸ್ತಾನ್ ಮೇಂ ಅಛೂತ್ ಲೋಗೋಂಕೇ ಸೂರತೇಹಾಲ್'' ಪಾಕಿಸ್ತಾನಿ ದಲಿತರ ದುರ್ದೆಸೆಯ ಮೇಲೆ ಬೆಳಕು ಚೆಲ್ಲುತ್ತದೆ. ಅಲ್ಲಿನ ಕೆಳಜಾತಿಗಳ ಜನರ ನಡುವೆ ಕೆಲಸ ಮಾಡುತ್ತಿರುವ ಪಿರ್ಭು ಲಾಲ್ ಸಾತ್ಯಾನಿ ಎಂಬುವರು ಈ ಪುಸ್ತಕದ ಲೇಖಕರು. ಉರ್ದುವಿನಲ್ಲಿರುವ ಈ ಪುಸ್ತಕದ ಪ್ರಕಾಶಕ ಸಂಸ್ಥೆ ಪಾಕಿಸ್ತಾನದ ಲಾಹೋರಿನ ಎ.ಎಸ್.ಆರ್.ರಿಸೋರ್ಸ್ ಸೆಂಟರ್.

ದೇಶ ವಿಭಜನೆಯ ಸಂದರ್ಭದಲ್ಲಿ ಈಗಿನ ಪಾಕಿಸ್ತಾನ ಸೀಮೆಯಲ್ಲಿ ನೆಲೆಸಿದ್ದ ಬಹುತೇಕ ಹಿಂದುಗಳು ಭಾರತಕ್ಕೆ ವಲಸೆ ಹೋದರು. ಪಾಕಿಸ್ತಾನದಲ್ಲಿ ಉಳಿದ ಬಹುಸಂಖ್ಯಾತರು ದಲಿತರೇ ಆಗಿದ್ದರು. ವಿಭಜನೆಯ ನಂತರವೂ ಹಿಂದೂಗಳ ಭಾರತ ವಲಸೆ ನಿರಂತರ. 1965, 1971ರ ಭಾರತ- ಪಾಕ್ ಯುದ್ಧಗಳು, 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಹಾಗೂ ಭಾರತದ ನಾನಾ ಭಾಗಗಳಲ್ಲಿ ಮುಸ್ಲಿಮರ ನರಮೇಧದ ನಂತರ ಗಣನೀಯ ಸಂಖ್ಯೆಯ ಪಾಕಿಸ್ತಾನಿ ಹಿಂದೂಗಳು ಭಾರತ ವಲಸೆ ಕೈಗೊಂಡರು. ವಲಸೆಗಾರರ ಪೈಕಿ ಬಹುತೇಕರು ಹಿಂದೂ ಸವರ್ಣೀಯರು. ದೈನಂದಿನ ಹೊಟ್ಟೆ ಬಟ್ಟೆಯ ಪಾಡಿನಲ್ಲೇ ಮೂಗಿನ ಮಟ್ಟ ಮುಳುಗಿದ್ದ ದಲಿತರಿಗೆ ವಲಸೆ ಹೋಗುವಷ್ಟು ಚೈತನ್ಯ ಇರಲಿಲ್ಲ.

ಪಾಕಿಸ್ತಾನೀ ದಲಿತರ ಪೈಕಿ ಮುಕ್ಕಾಲು ಪ್ರಮಾಣ ಭೂರಹಿತ ಕಷಿ ಕಾರ್ಮಿಕರು ಮತ್ತು, ಕಸ ಗುಡಿಸುವವರು. ಕೈಗೆ ಬೀಳುವ ಕೂಲಿ ಜುಜುಬಿ ಮೊತ್ತದ್ದು. ಮೇಲ್ಜಾತಿ ಹಿಂದೂಗಳು ಮತ್ತು ಮುಸಲ್ಮಾನ ಜಮೀನುದಾರರು ಇವರಿಂದ ಬಲವಂತದ ಬಿಟ್ಟಿ ಚಾಕರಿ ಮಾಡಿಸಿಕೊಳ್ಳತ್ತಾರೆ. ಭೂಮಾಲೀಕರು ಮತ್ತು ಲೇವಾದೇವಿಗಾರರ ಸಾಲ ತೀರಿಸಲು ಜೀತದಾಳುಗಳಾಗಿ ಬದುಕು ಸವೆಸುವವರೂ ಉಂಟು. ಪ್ರತಿಭಟಿಸಿದರೆ ಇವರ ಮೇಲೆ ಸುಳ್ಳು ಕೇಸು ದಾಖಲಾಗುವುದೇ ದಿಟ. ಇವರ ದನಕರುಗಳನ್ನು ಪಾತ್ರೆ ಪಡಗಗಳನ್ನೂ ಕಿತ್ತುಕೊಂಡು ಕಿರುಕುಳ ಕೊಡುವ ಸ್ಥಳೀಯ ಸರ್ಕಾರಿ ಸಿಬ್ಬಂದಿ. ದಲಿತರು ಗುಡಿಸಿಲು ಹಾಕುವ ಜಾಗವನ್ನು ಗ್ರಾಮೀಣ ಸಿಂಧ್‌ನ ಭೂ ಮಾಫಿಯಾ ಕಬ್ಜಾ ಮಾಡುತ್ತದೆ. ಸತ್ತವರ ದಹನ ಸಂಸ್ಕಾರದ ಜಾಗಗಳೂ ಸ್ಥಳೀಯ ಮುಸ್ಲಿಮರ ಪಾಲು.

ಶಾಲೆಗಳಲ್ಲಿ ದಲಿತ ಮಕ್ಕಳು ತಾರತಮ್ಯದ ಅವಹೇಳನವನ್ನು ನಿತ್ಯ ಭರಿಸುತ್ತಾರೆ. ಮುಸ್ಲಿಂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ದಟ್ಟ ದರಿದ್ರರಾಗಿದ್ದರೂ ದಲಿತರ ಮಕ್ಕಳಿಗೆ ವಿದ್ಯಾರ್ಥಿವೇತನ ದೊರೆಯದು. ವಿದ್ಯಾರ್ಥಿ ವೇತನದ ಹಣ ಝಕಾತ್ ನಿಧಿಯಿಂದ ಬರುತ್ತದೆ. ಝಕಾತ್ ನಿಧಿಯನ್ನು ಮಸ್ಲಿಮೀತರರು ಬಳಸುವಂತಿಲ್ಲ. ಬಡತನದ ಕಾರಣ ದಲಿತರ ಮಕ್ಕಳು ಉನ್ನತ ಶಿಕ್ಷಣ ವಂಚಿತರು. ಅಪಹರಿಸಿ, ಮಾನಭಂಗ ಮಾಡಿ ಇಸ್ಲಾಮ್‌ಗೆ ಮತಾಂತರ ಮಾಡುತ್ತಾರೆಂಬ ಭಯದಿಂದ ದಲಿತರು ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ.

ಬಹುಪಾಲು ದಲಿತರಿಗೆ ರಾಷ್ಟ್ರೀಯ ಗುರುತಿನ ಚೀಟಿ ನೀಡಿಲ್ಲ. ಹೀಗಾಗಿ ಸರ್ಕಾರಿ ಅಭಿವದ್ಧಿ ಯೋಜನೆಗಳಿಗೂ ಅವರು ಅಸ್ಪಶ್ಯರು. ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಲಾಗುವ ಸರ್ಕಾರಿ ಸೌಲಭ್ಯಗಳೆಲ್ಲ ಸಂಘಟಿತರೂ ಬಲಿಷ್ಠರೂ ಆದ ಕ್ರೈಸ್ತರು ಮತ್ತು ಹಿಂದೂ ಮೇಲ್ಜಾತಿಗಳ ಮಂದಿಯ ಪಾಲು. ಬಡತನ, ನಿರಕ್ಷರತೆ ಕಾಡಿರುವ ಇವರಿಗೆ ರಾಜಕೀಯ ನಾಯಕತ್ವ ಇಲ್ಲ. ಇನ್ನು ದಲಿತ ಚಳವಳಿಗಳ ಸೊಲ್ಲು ದೂರವೇ ಉಳಿಯಿತು. ಮುಸಲ್ಮಾನರು ಮತ್ತು ಹಿಂದೂ ಮೇಲ್ಜಾತಿಗಳು ಸೂಚಿಸಿದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಮತ ಹಾಕದೆ ಹೋದರೆ ದೈಹಿಕ ಹಲ್ಲೆ ನಿಶ್ಚಿತ. ಜೊತೆಗೆ ಮನೆ ಮಠವನ್ನೂ ಖಾಲಿ ಮಾಡಬೇಕು.

ಪಾಕಿಸ್ತಾನದಲ್ಲೂ ದಲಿತರು ಸವರ್ಣೀಯ ಹಿಂದೂಗಳ ದೇವಸ್ಥಾನಗಳನ್ನು ಪ್ರವೇಶಿಸುವಂತಿಲ್ಲ. ಅವರನ್ನು ತುಳಿಯಲು ಸ್ಥಳೀಯ ಮುಸ್ಲಿಮ್ ಊಳಿಗಮಾನ್ಯ ಒಡೆಯರ ಜೊತೆಗೆ ಹಿಂದೂ ಸವರ್ಣೀಯರು ಖುಷಿಯಾಗಿ ಕೈ ಜೋಡಿಸುವವರು. ಭಾರತದ ಹಳ್ಳಿಗಾಡುಗಳಲ್ಲಿ ನಡೆಯುವಂತೆ ಪಾಕಿಸ್ತಾನದಲ್ಲೂ ಮುಸ್ಲಿಮರು ಇಲ್ಲವೇ ಸವರ್ಣೀಯ ಹಿಂದೂಗಳ ಹೊಟೆಲುಗಳಲ್ಲಿ ಪ್ರತ್ಯೇಕ ತಟ್ಟೆ ಲೋಟ ಬಳಸಬೇಕು. ತಿಂದು ಕುಡಿದ ನಂತರ ಅವುಗಳನ್ನು ತೊಳೆದಿಡಬೇಕು. ಜಡ್ಡು ಜಾಪತ್ತಾದರೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಅವರನ್ನು ಮುಟ್ಟಿ ಪರೀಕ್ಷೆ ಮಾಡುವುದಿಲ್ಲ. ಸಾರ್ವಜನಿಕ ಬಳಕೆಗೆ ಇಟ್ಟಿರುವ ಯಾವ ವಸ್ತುಗಳನ್ನೂ ಇವರು ಮುಟ್ಟುವಂತಿಲ್ಲ. ದಲಿತ ಮಹಿಳೆಯರು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಇಲ್ಲವೇ ಮತಾಂತರದ ಸರಕುಗಳು. ರೋಸಿ ಹೋದ ಹಲವು ದಲಿತರು ಸ್ವಇಚ್ಛೆಯಿಂದ ಇಸ್ಲಾಮ್ ಇಲ್ಲವೇ ಕ್ರೈಸ್ತ ಧರ್ಮೀಯರಾಗಿ ಪರಿವರ್ತನೆ ಹೊಂದಿರುವುದಾಗಿ ಹೇಳುತ್ತದೆ ಸಾತ್ಯಾನಿ ಪುಸ್ತಕ.

ಅತ್ತ ಮುಸಲ್ಮಾನರು ಇತ್ತ ತಮ್ಮವರೇ ಆಗಬೇಕಿದ್ದ ಹಿಂದೂ ಸವರ್ಣೀಯರು. . . ಇಬ್ಬರೂ ಜೀವಂತ ಕಿತ್ತು ತಿಂದು ಹಿಂಸಿಸುವ ಈ ದಲಿತರು ಹುಟ್ಟುವುದು ಒಂದೇ ಬಾರಿಯಾದರೂ ಸಾಯುವುದು ಎರಡೆರಡು ಬಾರಿ ಇಲ್ಲವೇ ಲೆಕ್ಕವಿಲ್ಲದಷ್ಟು ಬಾರಿ ಎಂದರೆ ತಪ್ಪಾದೀತೇ?
 
ಕೃಪೆ : ವಿಜಯ ಕರ್ನಾಟಕ 

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.